ಊರು-ದೇಶದ ಮೂರು ಪದ್ಯಗಳು
ಊರು ಎಂಬುದು ನಮ್ಮ ಮಟ್ಟಿಗೆ ಮೂರ್ತವಾದುದು. ಅಲ್ಲಿನ ಜಾತಿ
ಜಗಳ, ಸಣ್ಣ ಸಣ್ಣ ಅಸೂಯೆಗಳು, ಜಮೀನಿನ ಗಡಿ ತಕರಾರುಗಳ ಜತೆಗೆ ಕಾಲ ಮುಂದಕ್ಕೆ ಹೋಗದೆಯೇ
ನಿಂತು ಬಿಟ್ಟಿದೆಯೇನೋ ಎನಿಸುವಷ್ಟು ಜಂಜಾಟಗಳಿಂದಲೇ ತುಂಬಿದ್ದರೂ ಆ ಊರು ಎಲ್ಲರ
ಇಷ್ಟದ್ದು. ಅಲ್ಲಿನ ಬೀದಿಗಳಿಂದ ಆರಂಭಿಸಿ ಜಗಳಗಳ ತನಕ ಎಲ್ಲವೂ ಸವಿ ನೆನಪುಗಳ ಪಟ್ಟಿಗೆ
ಸೇರುವಂಥವು.
ದೇಶ ಹಾಗಲ್ಲ. ಅದು ಅಮೂರ್ತವಾದುದು. ಅದಕ್ಕೆ ಸೇನೆ ಬೇಕು.
ಅದಕ್ಕೆ ದೇಶಾಭಿಮಾನವೂ ಬೇಕು. ಊರಿಗೆ ಬೇಕಾದ ಪ್ರೀತಿಯಷ್ಟೇ ಅದಕ್ಕೆ ಸಾಕಾಗುವುದಿಲ್ಲ.
ದೇಶವನ್ನು ಉಳಿಸಲು ಯುದ್ಧವೂ ಬೇಕಾಗಬಹುದು. ಶ್ರೀಲಂಕಾ ಒಂದು ದೇಶವಾಗುವ ತನಕ ಅದಕ್ಕೆ
ಯಾವ ಸಮಸ್ಯೆಯೂ ಇರಲಿಲ್ಲ. ದೇಶವಾದ ತಕ್ಷಣ ಅದರ ಭಾಷೆಯಾವುದು ಎಂಬ ಸಮಸ್ಯೆ ಬಂತು.
ತಮಿಳು ಉಗ್ರರು ಹುಟ್ಟಲು ಒಂದು ಅವಕಾಶವಾಯಿತು.
ಬರೇ ಊರಿನಲ್ಲಿ ಬದುಕಲು
ಸಾಧ್ಯವೇ? ರಸ್ತೆಗಳಿಂದ ಆರಂಭಿಸಿ ಎಲ್ಲ ಬಗೆಯ ಸಂಪರ್ಕ ಸಾಧನಗಳೂ, ಕರೆನ್ಸಿಯಂಥ ವಿನಿಮಯ
ಮಾಧ್ಯವೂ ಸಾಧ್ಯವಾಗುವುದು ದೇಶದಿಂದ. ಊರುಗಳೆಲ್ಲಾ ಊರಾಗಿಯೇ ಇದ್ದು ದೇಶವಾಗುವ ಒಂದು
ಪರಿಕಲ್ಪನೆಯನ್ನು ಗಾಂಧಿ ಗ್ರಾಮ ಸ್ವರಾಜ್ಯದ ಮೂಲಕ ನೀಡಿದ್ದರು. ಈ ಎಲ್ಲಾ ಕಲ್ಪನೆಗಳೂ
'ಊರು-ದೇಶ'ವೆಂಬ ಅನಂತಮೂರ್ತಿಯವರ ಈ ಸರಣಿ ಪದ್ಯಗಳಲ್ಲಿ ಅನಾವರಣಗೊಂಡಿದೆ.
-ಸಂಪಾದಕ, ಕೆಂಡಸಂಪಿಗೆ
ಊರು - ದೇಶ
ಸತ್ತು ಬದುಕಿ ಊರು
ಸೋತು ಗೆದ್ದು ದೇಶ
ಒಳದಾರಿ ತುಳಿದು ಊರು
ಹೆದ್ದಾರಿ ತಿಳಿದು ದೇಶ
ಗೊತ್ತಾಗಿ ಇರೋದು ಊರು
ಗುರಿಯಾಗಿ ಉಳಿಯೋದು ದೇಶ
ಎಣ್ಣಿ ಊರು; ಎಣಿಸಿ ದೇಶ
ಹರಟಿ ಊರು; ಸ್ತುತಿಸಿ ದೇಶ
ಒಂದು ಮಮತೆಗೆ
ಇನ್ನೊಂದು ಘನತೆಗೆ
ಬದುಕಿದ್ದು ಊರು
ಭಾವಿಸಿದ್ದು ದೇಶ
ಒಂದು ಕಥೆ
ಇನ್ನೊಂದು ಇತಿಹಾಸ
--------
ಊರಿಲ್ಲದ ದೇಶ
ಊರಿಗೊಂದು ದೇಶವಾಗಿ
ದೇಶಕ್ಕೊಬ್ಬ ರಾಜನಾಗಿ
ಊರೇ ಇಲ್ಲದ ದೇಶಗಳಲ್ಲಿ
ಮಲಗೋದು ಇಲ್ಲಿ
ಏಳೋದು ಅಲ್ಲಿ
ದೇಶಕ್ಕೊಂದು ಬಾವುಟವಾಗಿ
ಬಾವುಟಕ್ಕೊಂದು ಚರಿತ್ರೆಯಾಗಿ
ನನಪೇ ಉಳಿಯದ ದೇಶಗಳಲ್ಲಿ
ಅಣ್ಣ ಸ್ವದೇಶಿ
ತಮ್ಮ ವಿದೇಶಿ
---------
ಊರಾದ ದೇಶ
ಕೂಲಿಗೆ ಜ್ಞಾನಿಗೆ ಪಕ್ಷಿಗೆ ಜಿಪ್ಸಿಗೆ
ಹರಿಯುವ ನೀರಿಗೆ ಮುಗಿಲಿನ ತೆವಲಿಗೆ
ದನಗಳ ಮೇವಿಗೆ ಕವಿಗಳ ಊಹೆಗೆ
ಬಿಸಿಲಿನ ಇಲ್ಲಿಗೆ, ತಂಪಿನ ಅಲ್ಲಿಗೆ
ಕಂಡೂ ಕಾಣದ ಊರಿರಬೇಕು
ನೋಡಿ ಮಗಿಯದ ದೇಶವು ಬೇಕು
ಡೊಂಬಗೆ ಡ್ಯಾಂಡಿಗೆ ಚೆಂಡಿನ ಹುಚ್ಚಗೆ
ಕಾಮಿಯ ತೀಟೆಗೆ ಸಂತನ ಕಾಣ್ಕೆಗೆ
ಸಕಾಲ ಋತುವಿಗೆ ತತ್ಪರ ಬಂಡೆಗೆ
ಮಗ್ಧನ ಕನಸಿಗೆ ಧೀರನ ನಿಲುವಿಗೆ
ಕಂಡೂ ಕಾಣದ ಊರಿರಬೇಕು
ನೋಡಿ ಮಗಿಯದ ದೇಶವು ಬೇಕು
ಸೋಮವಾರ, 13 ಅಕ್ಟೋಬರ್ 2008(ಕೆಂಡಸಂಪಿಗೆ)
- 1376 reads
Comments
0 comments postedPost new comment