ಬ್ರೆಕ್ಟ್ ಕವಿತೆಗಳು
ಬರ್ಟೋಲ್ಡ್ ಬ್ರೆಕ್ಟ್ ಎಂಬ ಈ ಜರ್ಮನ್ ನಾಟಕಕಾರ ಪ್ರಾಯಶಃ ಶೇಕ್ಸ್ ಪಿಯರ್ ನಂತರ ನಾಟಕದ ಬಗ್ಗೆ ನಾವು ಆಲೋಚನೆ ಮಾಡುವ ಕ್ರಮವನ್ನೇ ಬದಲಿಸಿದವನು. ಅವನ ಏಲಿಯನೇಷನ್ ಥಿಯೆರಿಗೆ ಭಾರತೀಯ ಜನಪದ ರಂಗಭೂಮಿಯೂ ಕೂಡ ಪ್ರಭಾವ ಬೀರಿದೆ ಅಂತ ಹೇಳುವವರಿದ್ದಾರೆ. ಒಂದು ಗುಟ್ಟಿನ ವಿಚಾರ ಎಂದರೆ ಅವನು ನಾಟಕ ಬರೆಯುತ್ತಿದ್ದ ಹಾಗೆಯೇ ತನ್ನ ಚಿಕ್ಕ ವಯಸ್ಸಿನಿಂದ ಪದ್ಯಗಳನ್ನೂ ಬರೆಯುತ್ತಿದ್ದ. ಆದರೆ ಅವುಗಳೆಲ್ಲ ತೆರೆಯ ಹಿಂದೆಯೇ ಉಳಿದಿದ್ದವೇ ಹೊರತು ಅವುಗಳನ್ನು ಆತ ಜನರ ಮುಂದೆ ತರಲಿಲ್ಲ. ಬ್ರೆಕ್ಟ್ ಸತ್ತ ಮೇಲೆ ಆತ ಎಷ್ಟು ದೊಡ್ದ ಕವಿ ಎಂದು ಗೊತ್ತಾಗುತ್ತಿದೆ. ಜರ್ಮನ್ ಕವಿಗಳಲ್ಲಿ ಆತನನ್ನ ರಿಲ್ಕ್ ನಿಗೆ ಸರಿಸಮ ಎಂದು ನೋಡುವವರಿದ್ದಾರೆ. ಆದರೆ ಒಂದು ವಿಶೇಷ ಎಂದರೆ ಆತನ ಬರವಣಿಗೆಗಳಲ್ಲಿ ಅಲಂಕಾರವೇ ಇರಲಿಲ್ಲ. ಅವನಿಗೆ ವಿಚಾರವೇ ಮುಖ್ಯ. ಆತನ ಕವಿತೆಯ ತಿರುಳಿನಲ್ಲಿ ಒಂದು ದೊಡ್ದ ವಿಚಾರವಿರುತ್ತದೆ. ಅದನ್ನು ಆತ ಬಹಳ ಸರಳವಾಗಿ ಹೇಳುತ್ತಿದ್ದಾನೆಂದು ಅನಿಸಿದರೂ ಆ ವಿಚಾರ ಸರಳವಲ್ಲದ ಒಂದು ಗುಟ್ಟಿನಂತೆ ಗುಪ್ತವಾಗಿ ಇರುತ್ತದೆ.
ಬ್ರೆಕ್ಟನ ಕೆಲವು ಪದ್ಯಗಳನ್ನ ಮಾತ್ರ ನಾನು ಆಯ್ದು ಭಾಷಾಂತರ ಮಾಡಿದ್ದೇನೆ. ಅದರಲ್ಲಿ ಒಂದು ಸರಣಿ ಅವನ ಕಾವ್ಯ ರಚನೆ ಬಗ್ಗೆ, ಒಟ್ಟಾರೆ ಸಾಹಿತ್ಯ ರಚನೆ ಮತ್ತು ಒಬ್ಬ ಲೇಖಕನ ಜವಾಬ್ದಾರಿಗಳ ಬಗ್ಗೆ ಇದೆ. ಇನ್ನೊಂದು ಅವನ ಪ್ರೇಮದ ಪದ್ಯಗಳು. ತನ್ನ ಐವತ್ತೆಂಟರ ವಯಸ್ಸಿನ ವರೆಗೆ ಬದುಕಿದ್ದ ಬ್ರೆಕ್ಟ್ ಇವತ್ತಿಗೂ ನನ್ನನ್ನು ಕಾಡುವ ಕವಿ. ಆತ ಎರಡರ ವಿರುದ್ಧ ಹೋರಾಡಬೇಕಾಗಿ ಬಂತು. ಒಂದು ಹಿಟ್ಲರನ ವಿರುದ್ಧ. ಇನ್ನೊಂದು, ಆತ ತುಂಬಾ ಬೆಂಬಲಿಸುತ್ತಿದ್ದ ಸೋವಿಯತ್ ಕಮ್ಯೂನಿಸ್ಟ್ ಪಕ್ಷದ ವಿರುದ್ಧ. ಸ್ಟಾಲಿನ್ ಮಾಡಿದ ಅಪರಾಧಗಳೆಲ್ಲವೂ ಕೂಡ ಆತನಿಗೊಂದು ದೊಡ್ದ ಸಮಸ್ಯೆಯಾಗಿತ್ತು. ಅದನ್ನು ಆತ ತನ್ನ ಪಕ್ಷದ ನೀತಿಗೆ ಅಡ್ಡಬರಬಾರದು ಅಂತ ಎಷ್ಟು ವಿರೋಧ ಮಾಡಬೇಕಿತ್ತೋ ಅಷ್ಟು ಮಾಡಲಿಲ್ಲ ಎಂಬ ದೂರಿದೆ. ಆದರೆ ಅದನ್ನಾತ ಮಾಡಿದ್ದಾನೆ. ಅವನಿಗೆ ಬಹಳ ಹತ್ತಿರವಾಗಿದ್ದವನು ಐರೋಪ್ಯ ವಿಮರ್ಶಕ,ಚಿಂತಕರಲ್ಲೆಲ್ಲ ಬಹಳ ಪ್ರಖ್ಯಾತನಾದ ವಾಲ್ಟರ್ ಬೆಂಜಮಿನ್.
ಆತನ ಕವಿತೆಗಳೆಲ್ಲವೂ ಜರ್ಮನ್ ಭಾಷೆಯಲ್ಲಿರುವುದರಿಂದ ನಾನು ಅವುಗಳ ಇಂಗ್ಲಿಷ್ ಭಾಷಾಂತರವನ್ನು ತೆಗೆದುಕೊಂಡು ಕನ್ನಡಕ್ಕೆ ಅನುವಾದ ಮಾಡಿದ್ದೇನೆ. ಅದರ ತಿರುಳನ್ನ ಮುಖ್ಯವಾಗಿ ಇಟ್ಟುಕೊಂಡು ಬೇಕಾದ ಬದಲಾವಣೆಗಳನ್ನ ಮಾಡಿಕೊಂಡಿದ್ದೇನೆ. ಹಾಗೇ ಮಾಡಿಕೊಂಡಿರುವುದು ಅವನಿಂದ ದೂರವಿರುವುದಕ್ಕಲ್ಲ, ಅವನಿಗೆ ಹತ್ತಿರವಾಗವಾಗುವುದಕ್ಕೆ.
ಕನ್ನಡ ಕಾವ್ಯದ ಈ ಹೊತ್ತಿನ ತರುಣ ತರುಣಿಯರಿಗೆ ಬ್ರೆಕ್ಟನ ಆ ಕಾಲದ ತಳಮಳಗಳು ತಮ್ಮದೂ ಎಂದೂ ಅನಿಸಲಿ ಎಂಬುದು ನನ್ನ ಆಸೆ.
-ಅನಂತಮೂರ್ತಿ
ಅನಾಮಧೇಯ
ಗೆಳೆಯರಿಗೆ ಸ್ಟೇಶನ್ನಿನಲ್ಲೇ ಬೈ ಹೇಳಿ
ಮಂಜು ಕವಿದ ನಸುಕಿನಲ್ಲಿ
ಸೀದಾ ಬಂದು ಬಿಡು ಸಿಟಿಯೊಳಗೆ,
ಕೋಟಿನ ಗುಂಡಿ ಹಾಕಿಕೊ
ಸಿಕ್ಕಿದ ರೂಮೊಂದನ್ನು ತಗೊ
ನಿನ್ನ ಗೆಳೆಯರೇ ಬಂದು ಬಾಗಿಲು ತಟ್ಟಿದರೂ
ತೆಗೀ ಬೇಡ
ಬೇಡ, ಬಾಗಿಲು ತೆಗೀಲೇ ಬೇಡ
ಯಾರಿಗೂ ನಿನ್ನ ಸುಳಿಹು ಸಿಗದಂತೆ ಇದ್ದುಬಿಡು.
ನಿನ್ನ ಅಪ್ಪನೇ ಆಗಲಿ, ಅಮ್ಮನೇ ಆಗಲಿ
ಹ್ಯಾಂಬರ್ಗನಲ್ಲೋ ಎಲ್ಲೋ ಸಿಕ್ಕರು ಅನ್ನು
ಅವರು ಅಪರಿಚಿತರು ಎನ್ನುವಂತೆ ಮುಖ ತಿರುಗಿಸಿ
ಹ್ಯಾಟನ್ನ ಮುಖಮುಚ್ಚುವಂತೆ ಎಳೆದು
ಕಾಲು ಕಿತ್ತುಬಿಡು
ನಿನ್ನ ಕುರುಹುಗಳನ್ನು ಅಳಿಸುತ್ತಲೇ ಓಡಾಡು.
ಉಣ್ಣಲು ಸಿಕ್ಕಾಗ ಸಿಕ್ಕಿದ್ದನ್ನ ಹೊಟ್ಟೆತುಂಬ ತಿಂದುಬಿಡು
ಹಸಿದಿರಬೇಡ
ಅಕಸ್ಮಾತ್ ಮಳೆಬಂತೊ, ಯಾರ ಮನೆಯೊಳಗಾದರೂ ಹೊಕ್ಕು ಬಿಡು
ಸಿಕ್ಕ ಕುರ್ಚಿ ಮೇಲೆ ಕುತುಕೊ
ಹೆಚ್ಚು ಹೊತ್ತು ಅಲ್ಲೇ ಊರಿರಬೇಡ
ನಿನ್ನ ಹ್ಯಾಟನ್ನ ಮರೀಬೇಡ.
ಇಷ್ಟು ನೆನಪಿರಲಿ
ಯಾರಿಗೂ ನಿನ್ನ ಸುಳಿಹು ಹತ್ತದಿರಲಿ.
ಏನಾರು ಹೇಳಬೇಕಾಗಿಬಂದರೆ ಅದನ್ನ ಎರಡು ಸಾರಿ ಹೇಳಬೇಡ.
ನಿನ್ನ ಥರಾನೇ ಯೋಚಿಸೋರು ಸಿಕ್ಕರೆ
ನನಗದೇನೂ ಗೊತ್ತಿಲ್ಲ ಎಂದುಬಿಡು
ತನ್ನ ಸಹಿಯನ್ನೇ ಹಾಕದವನನ್ನು
ತನ್ನ ಚಿತ್ರವೇ ಇಲ್ಲದವನನ್ನು
ಯಾರೂ ಅಲ್ಲದವನನ್ನು
ಹೇಗೆ ಹಿಡಿದಾರು ಹೇಳು?
ನಿನ್ನ ಗುರುತುಗಳನ್ನೆಲ್ಲ ಒರೆಸಿಹಾಕು.
ನಿನ್ನ ಗೋರಿ ಮೇಲೆ
ಸತ್ತ ತಾರೀಖು
ಸತ್ತವನ ಹೆಸರು
ಅದಕ್ಕೊಂದು ಕಲ್ಲು
ಏನೂ ಬೇಡ.
ಸತ್ತವನನ್ನೇ ಯಾರೆಂದು ಪತ್ತೆ ಮಾಡಿ
ಪೀಡಿಸಿಯಾರು; ಜೋಕೆ
ಇರಲೇ ಇಲ್ಲ ಎನ್ನುವ ಹಾಗೆ ಇದ್ದುಬಿಡು
(ಜರ್ಮನಿಯಲ್ಲಿ ಪ್ಯಾಸಿಸಂ ಹರಡುತ್ತ ಇದ್ದಾಗಿನ ಸಂದರ್ಭದಲ್ಲಿ ಬಂದ ಪದ್ಯಗಳಲ್ಲಿ ಒಂದು)
೧. ಕೊರೆದ ಚೀನೀ ಸಿಂಹ
(On a Chinese Carving of a Lion)
ಕೆಡುಕರು ನಿನ್ನ ಉಗುರಿಗೆ ಭೀತರಾದರೆ
ಒಳ್ಳೆಯಜನ ನಿನ್ನ ದಿಟ್ಟ ಚಲನೆಯ ಲಾವಣ್ಯಕ್ಕೆ
ಮನಸೋಲುತ್ತಾರೆ
ನನ್ನ ಕಾವ್ಯವೂ ಹೀಗೆ ತೋರಬೇಕೆಂದು ನನ್ನ ಆಸೆ
೨. ಶೂನ್ಯ
(Going down early to the void)
ಇದ್ದಕ್ಕಿದ್ದಂತೆ ಖಾಲಿಯಾಗಿಬಿಡುತ್ತೇನೆ
ಅಷ್ಟೇ ಬೇಗ ತುಂಬಿಕೊಳ್ಳುತ್ತೇನೆ
ಏನೇನೂ ತೋಚದಂತೆ ಇದ್ದು ಬಿಟ್ಟನಂತರ
ತಾನೇ ಏನೋ ತೋಚುತ್ತದೆ
ಪ್ರೀತಿಸುತ್ತೇನೆ, ಅದೇ ಕರೆಕರೆಯಾಗಿ
ತೆಪ್ಪಗಾಗುತ್ತೇನೆ
ತೆಪ್ಪಗೆ ತನ್ನಷ್ಟಕ್ಕಿದ್ದು ತಣ್ಣಗಾದವನು
ಮತ್ತೆ ಬಿಸಿಯಾಗುತ್ತೇನೆ.
೩. ಪ್ರೇಯಸಿಯ ಹಾಡು
(Song of a Loving Woman)
ನಿನ್ನಿಂದ ಸುಖಪಡೆಯುವಾಗ
ಒಮ್ಮೊಮ್ಮೆ ಅನ್ನಿಸತ್ತೆ:
ಈಗ ನಾನು ಸತ್ತುಬಿಟ್ಟರೆ
ಸಾಯುವ ತನಕ ಸುಖಿಯಾಗಿ ಇದ್ದಂತೆ.
ಆಮೇಲೆ ನೀನು ಮುದುಕನಾದಾಗ
ನನ್ನನ್ನು ನೆನೆದೆ, ಎಂದುಕೊ
ಆಗ ನಿನಗೆ ಇನ್ನೂ ಹರೆಹರೆಯದ ಪ್ರೇಯಸಿ
ಇರುತ್ತಾಳೆ.
೪. ಪ್ರೇಮ ಗೀತಗಳು
೧
ಗಿಡದಲ್ಲಿ ಏಳು ಗುಲಾಬಿ
ಆರು ಗಾಳಿಗೆ
ಉಳಿದಿರುವ ಒಂದು
ನನಗೆ ಸಿಗಲೆಂದು
ನಿನ್ನನ್ನ ಕರೆದೇ ಕರೀತೀನಿ
ಆರು ಸಾರಿ ನೀನು ಬರಲ್ಲ
ಏಳನೇ ಸಾರಿ ಮಾತ್ರ, ಮಾತುಕೊಡು,
ತಡಮಾಡದೆ ಬಂದು ಬಿಡು.
೨
ನನ್ನ ಪ್ರಿಯತಮ ನನಗೊಂದು
ಹಳದಿಗೆ ತಿರುಗಿದ ಎಲೆಗಳ ಟೊಂಗೆ ತಂದ
ವರ್ಷದ ಕೊನೆ
ಪ್ರೀತಿ ಚಿಗುರಲಿದೆ.
೩
ನಾವು ಅಗಲಿದ ಮೇಲೆ
ಈಗಲೂ ನಿತ್ಯವೆನ್ನಿಸುವ
ಆ ದಿನದಿಂದಾಗಿ
ಎಲ್ಲವೂ ಸುಖದಾಯಕವೆಂದು
ಕಾಣತೊಡಗಿದೆ.
ಆ ಸಂಜೆ-- ಯಾವುದು? ಗೊತ್ತಲ್ಲವೆ?-
ಕಳೆದ ಕಾಲದನಂತರ
ನನ್ನ ಕಾಲುಗಳು ಹೆಚ್ಚು ಚುರುಕಾಗಿವೆ
ನನ್ನ ಬಾಯಿ ನಿರ್ಮಲವೆನ್ನಿಸುತ್ತದೆ.
ಮರಗಳು ಪೊದೆಗಳು ಹುಲ್ಲುಗಾವಲುಗಳು
ಎಲ್ಲವೂ ಇನ್ನಷ್ಟು ಹಚ್ಚನೆಯ ಹಸಿರು ಎನ್ನಿಸುತ್ತವೆ
ನಾನು ಮುಖ ತೊಳೆದುಕೊಳ್ಳುವ ಅದೇ ನೀರು
ಬಲು ಹಿತದ ತಂಪು ಎನ್ನಿಸುತ್ತದೆ.
೫. ವಿಚಾರ
(When it is a notion )
ಅದೊಂದು ವಿಚಾರಮಾತ್ರ ಆಗಿದ್ದಾಗ
ಎಲ್ಲರೂ ಅಡ್ಡಿಯಿಲ್ಲ, ಅದು ಸರಿ, ಅದು ಸರಿ ಎನ್ನುವವರೇ.
ಅದೇ ವಿಚಾರ ಅನುಷ್ಠಾನಗೊಳ್ಳುತ್ತ ಬೆಳೆಯತೊಡಗಿದಾಗ
ಶುರುವಾಗಿಬಿಡುತ್ತದೆ:
ಅನುಮಾನ, ಒಡಕು, ವಿರೋಧ..
೬. ಕಲೆಯ ನಿಷ್ಠೆ
(on seriousness in art)
ಚಿನ್ನದಲ್ಲಿ ಕುಸುರಿ ಕೆಲಸ ಮಾಡುವ ಸೊನೆಗಾರನ
ಏಕಾಗ್ರತೆಯ ಚಳಕ ನಮ್ಮದು;
ಕದಮುಚ್ಚಿ ರಹಸ್ಯದಲ್ಲಿ ಬಹಿಷ್ಕೃತ ಪ್ಯಾಂಪ್ಲೆಟನ್ನು ಅಧ್ಯಯನ ಮಾಡುತ್ತ ಕೂತವರ
ತರಾತುರಿಯ ತತ್ಪರತೆ ನಮ್ಮದು.
ರೋಗದ ತಪಾಸಣೆಯಲ್ಲಿ ನಿರತನಾದ ವೈದ್ಯನ
ತಾಳ್ಮೆಯ ಕುತೂಹಲ ನಮಗೆ ಯುಕ್ತವಲ್ಲದ್ದು;
ಸಾತ್ವಿಕಭಕ್ತಿಯ, ಅಥವಾ ಉಗ್ರ ನೈತಿಕತೆಯ
ಪಾದ್ರಿಯೊಬ್ಬನ
ಸರ್ವಜ್ಞ ಠೀವಿಯ ಗತ್ತು ಗರ್ವ ಗಳಂತೂ
ಏನೇನೂ
ಯಾವತ್ತೂ
ಕಲಾವಿದನ ಕಾಯಕಕ್ಕೆ ಸಲ್ಲದು
- 852 reads
Comments
1 comment postedatmeeya sir naanu sha baalu rao anuvadisida Brecht kavitegannu odiruve. prati sala odidaga ibbara baggegu gowrava krutajnate tumbi barutte. ee kavitegalu namma dainikada tarale tapatrayagana naduve untu maduva bhava spandana, koduva arivu amejing annisutte. neevu barediruva tippani jote kelavu anuvadagannnu kandaaga kuuda khushi aitu. sir innastu anuvada madalu aagutta? nimma aroogya noodikondu ee sahasa madi
Post new comment