ವಾಸ್ತವದ ಋಜುತ್ವ ಕಾಣುವ ಒಂದು ರೂಪಕ

ಈ ಲೇಖನದಲ್ಲಿ ಫಣಿರಾಜ್ ಅವರು ದಕ್ಷಿಣ ಏಷ್ಯಾದ ಸಂಬಂಧಗಳನ್ನು ಕೇಂದ್ರವಾಗಿಟ್ಟು ಅನಂತಮೂರ್ತಿಯವರು ಬರೆದ ಲೇಖನಗಳಿಗೆ ಪ್ರತಿಕ್ರಿಯಿಸಿದ್ದಾರೆ

ಳೆದ ನಾಲ್ಕು ವಾರಗಳ `ಋಜುವಾತು' ಅಂಕಣದಲ್ಲಿ ಅನಂತಮೂರ್ತಿ ಯವರು ಕಥನಾಶೈಲಿಯಲ್ಲಿ ತಮ್ಮ ವಿಚಾರಗಳನ್ನು ನಿರೂಪಿಸುತ್ತಿದ್ದಾರೆ. ಕಥನಾಶೈಲಿಯ ನಿರೂಪಣೆ ಆಪ್ತವಾಗಿರುತ್ತದೆ, ಕತೆಗಾಗಿಯೇ ಓದುವ ಕುತೂಹಲವನ್ನು ಓದುವವರಲ್ಲಿ (ಕೇಳುವವರಲ್ಲಿ) ಮೂಡಿಸುತ್ತದೆ. ಅನಂತಮೂರ್ತಿಯವರ ಬರಹದಲ್ಲಿ ಈ ಗುಣಗಳಂತೂ ಇದ್ದೇ ಇವೆ- ಅನಂತಮೂರ್ತಿ ನಮ್ಮ ಅಗ್ರಪಂಕ್ತಿಯ ಕತೆಗಾರರಾಗಿರುವುದರಿಂದ ಇದು ವಿಶೇಷವಲ್ಲ. ಆದರೆ ವೈಚಾರಿಕ ನಿಲುವುಗಳನ್ನು ಕಥನಾಶೈಲಿಯಲ್ಲಿ ನಿರೂಪಿಸುವಾಗ, ಅದರಲ್ಲೂ ಸ್ವಾನುಭವದ ಕಥನವಾಗಿ ನಿರೂಪಿಸುವಾಗ, ಕೆಲವು ಅಪಾಯಗಳು ಇರುತ್ತವೆ.

ಸಿದ್ಧವಾದ ಸೈದ್ಧಾಂತಿಕ ದೃಷ್ಟಿಕೋನದಿಂದ ವಿಚಾರಗಳನ್ನು ಪ್ರಕಟಿಸುವಾಗ ಕಣ್ಣೋಟ ಕಿರಿದಾಗುವ ಹಾಗೆಯೇ ಉದ್ದೇಶಿತ ನಿಲುವನ್ನು ಕಥಾಮಾರ್ಗದಲ್ಲಿ ನಿರೂಪಿಸುವಾಗಲೂ ಆಗುತ್ತದೆ. ಇಲ್ಲಿ, ನಿರೂಪಕನ ವಿಚಾರಗಳ ಸಾಚಾತನವನ್ನು ಸಾಬೀತು ಮಾಡುವುದು ಮಾತ್ರ ಕತೆಯ ಕೆಲಸ. ಇದು ಒಂದು ಬಗೆಯ ಅಪಾಯ. ಮತ್ತೊಂದು ಇದಕ್ಕೆ ತದ್ವಿರುದ್ಧವಾದದ್ದು: ನಿರೂಪಕ, ತನ್ನ ಕತೆಯ ಮೋಹದಲ್ಲಿ ತಾನೇ ಸಿಲುಕಿ, ಕತೆ ಹೇಳುವುದೇ ಒಂದು ವಿಲಾಸವಾಗಿ, ಕೊನೆಗೆ ತಾನು ಹೇಳಹೊರಟ ವಿಚಾರದ ಸ್ಪಷ್ಟತೆಯನ್ನೇ ಕಳೆದುಕೊಂಡುಬಿಡುವುದು. ಹಾಗಿದ್ದರೆ ಯಾವ ಸುಖಕ್ಕಾಗಿ ಕಥನಾ ಮಾರ್ಗ ಹಿಡಿಯಬೇಕು?

ವೈಚಾರಿಕ ನಿಲುವುಗಳನ್ನು ಕಥನವಾಗಿಸುವುದರಲ್ಲಿ ಎರಡು ಉದ್ದೇಶವಿರಬೇಕು: 1.ನನ್ನ ಅಭಿಪ್ರಾಯಗಳ ಬಗ್ಗೆ ನನಗೆ ಸ್ಪಷ್ಟತೆ ಇದೆ. ಆದರೆ ಅದೇ ಪೂರ್ಣ ನಿಜವಿರಲಿಕ್ಕಿಲ್ಲ. 2. ನಿರ್ದಿಷ್ಟ ಘಟನಾವಳಿಯಲ್ಲಿ ನನ್ನ ಅಭಿಪ್ರಾಯಗಳ ಸಹಿತ ನಾನು ಒಂದು ಪಾತ್ರವಾಗಿ ಲೀನವಾಗಿ ಪುರುಷ ಪರೀಕ್ಷೆಗೆ ಒಡ್ಡಿಕೊಳ್ಳುವುದು. ಘಟನಾವಳಿಗೆ ಸಿಕ್ಕಿದ್ದ ನನ್ನ ಅಭಿಪ್ರಾಯಗಳ ಗತಿ ಎಂತಾದರೂ, ಒಟ್ಟೂ ನಿರೂಪಣೆಯಿಂದ ವಾಸ್ತವದ ಋಜುತ್ವವನ್ನು ಕಾಣುವ ಒಂದು ರೂಪಕ ಕಟ್ಟಿಕೊಂಡೀತು ಎಂಬ ಹಂಬಲ. ಈ ಉದ್ದೇಶಗಳು ಈಡೇರದಿದ್ದರೆ ಕಥನಗಳು ಪಂಡಿತರ ಅಹಂನ ಕಾಲಕ್ಷೇಪವೋ, ಮುದ ನೀಡುವ ವಿಲಾಸವೋ ಆಗಿ ಉಳಿಯುತ್ತವೆ. ಕಳೆದ ನಾಲ್ಕು ವಾರಗಳ ಅಂಕಣಗಳು ಪರಿಶೋಧನೆಯಿಂದ ಹುಟ್ಟಿಕೊಂಡ ರೂಪಕಗಳಾಗಿರುವು ದರಿಂದಲೇ ಅಪರೂಪದ ಕಥನಗಳಾಗಿವೆ.

ದಕ್ಷಿಣ ಏಷ್ಯಾದ ಹಿಂದು-ಮುಸ್ಲಿಮರ ಸಂಬಂಧಗಳನ್ನು ಕುರಿತ ಮೂರು ಅಂಕಣಗಳು ಒಂದರ ಹಿಂದೊಂದು ಪ್ರಕಟವಾದವು. ಈ ವಿಷಯದ ಬಗ್ಗೆ ಈಗಾಗಲೇ ಸ್ಥಾಪಿತವಾಗಿರುವ ಕೆಲವು ನಿಲುವುಗಳಿವೆ. ಒಂದನೆಯದು: ಮುಸ್ಲಿಮರದ್ದು ಧಾರ್ಮಿಕ ಮೂಲಭೂತವಾದವನ್ನು ನೆಚ್ಚಿಕೊಂಡಿರುವ ಸಮುದಾಯ. ಹಿಂದೂ ಸಮುದಾಯವನ್ನು ಪೂರ್ಣ ನಿರ್ನಾಮ ಮಾಡುವುದೇ ಅವರ ಗುರಿ. ಈ ಗುರಿ ಸಾಧಿಸಲು ಅವರು ಯಾವುದಕ್ಕೂ ಹೇಸರು. ಹೀಗಾಗಿ, ಮುಸ್ಲಿಮರು, ಅವರು ಲಾಗಾಯ್ತಿನಿಂದ ನಿಮ್ಮ ಜೊತೆ ಬದುಕಿಕೊಂಡಿರುವ ನಿಮ್ಮ ಊರಿನವರಾದರೂ ಸರಿ, ನಂಬಿಕೆಗೆ ಯೋಗ್ಯರಲ್ಲದ ಶತ್ರುಗಳು ಎಂದು ತಿಳಿದು, ಅವರನ್ನು ಅಂಕೆಯಲ್ಲಿ ಇಡಲಿಕ್ಕೆ ಎಂಥಾ ದುಷ್ಟ ಮಾರ್ಗಗಳಾನ್ನಾದರೂ ಅನುಸರಿಸುವುದು ತಪ್ಪಲ್ಲ. ಇದು ಭಾರತದಲ್ಲಿ ವ್ಯಾಪಕವಾಗಿ ತಳ ಊರುತ್ತಿರುವ `ಹಿಂದುತ್ವವಾದಿ' ನಿಲುವು.

ಎರಡನೆಯದು: ನಮ್ಮ ಊರಿನ ಮುಸಲ್ಮಾನರು ನಮ್ಮ ಜೊತೆ ಚೆನ್ನಾಗಿದ್ದಾರೆ, ಆದರೆ ಇತ್ತೀಚಿಗಿನ ಪೀಳಿಗೆಯಲ್ಲಿ ಬಹುಸಂಖ್ಯಾತ ಹಿಂದೂಗಳ ಜೊತೆ ಹೊಂದಿಕೊಂಡು ಹೋಗುವ ಗುಣ ಕಾಣುತ್ತಿಲ್ಲ. ಬಹುಸಂಖ್ಯಾತರ ನಂಬಿಕೆಗಳಿಗೆ ಗೌರವ ಕೊಟ್ಟುಕೊಂಡು ಬದುಕಿದರೆ ಯಾವ ತಕರಾರಿಲ್ಲ, ಇದನ್ನು ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು. ಇದು ಅತ್ತ ಇತ್ತ ಹೊಯ್ದಾಡುತ್ತಿರುವ ಸಾಮಾನ್ಯ ಜನರ ನಿಲುವು.
ಮೂರನೆಯದ್ದು ಕೊಡು ಕೊಳ್ಳುವಿಕೆಯ ಕೆಲವು ಪ್ರಸಂಗಗಳು, ಎರಡು ಧರ್ಮಗಳ ನಂಬಿಕೆಯಲ್ಲಿರುವ ಸಮಾನ ಗುಣಗಳನ್ನು ತಾಳೆ ಹಾಕಿಕೊಂಡು ಕಟ್ಟಿಕೊಂಡಿರುವ `ಹಿಂದು-ಮುಸ್ಲಿಂ ಭಾಯಿ ಭಾಯಿ' ಎಂಬ ರಮ್ಯ ನಿಲುವು.

ನಾಲ್ಕನೆಯದು: ಭಾರತದ ಪ್ರಜಾಪ್ರಭುತ್ವದ ಸಾಂವಿಧಾನಿಕ ನಿಲುವು; ಹಿಂದುಗಳು-ಮುಸಲ್ಮಾನರು ಭಾರತದ ಸಮಾನ ಪ್ರಜೆಗಳು. ಸಂವಿಧಾನ ಬದ್ಧ ಹಕ್ಕು, ಸ್ವಾತಂತ್ರ್ಯಗಳು, ಕಾನೂನು ನಡಾವಳಿಗಳೂ ಇಬ್ಬರಿಗೂ ಸಮ ಸಮ. ಈ ಸಾಂವಿಧಾನಿಕ ಚೌಕಟ್ಟಿನಲ್ಲಿ ಬದುಕುವುದು ಎಲ್ಲರ ಕರ್ತವ್ಯ.

ಅನಂತಮೂರ್ತಿಯವರು ಹಿಂದುತ್ವವಾದಕ್ಕೆ ಸ್ಪಷ್ಟವಾದ ವಿರೋಧ ತೋರು ತ್ತಿರುವವರು; ಉಳಿದ ಮೂರು ನಿಲುವುಗಳಲ್ಲಿ ಯಾವುದಾದರೂ ಒಂದನ್ನು ನೆಚ್ಚಿಕೊಂಡವರಲ್ಲ; ಆದರೆ ಸಭ್ಯ ಸಾಮಾಜಿಕ ಜೀವನಕ್ಕೆ ಯಾವುದು ಮುಖ್ಯವೋ, ಅಂತಹ ಅಂಶಗಳನ್ನು ಈ ಮೂರು ನೆಲೆಗಳಿಂದ ಸ್ವೀಕರಿಸಲು ತಯಾರಿರುವವರು. ಹಾಗೆಂದು, ಈ ಮೂರು ನೆಲೆಗಳಿಂದ ಬೇಕಾದ್ದನ್ನು ಆಯ್ದು `ಹಿಂದು-ಮುಸ್ಲಿಮ್‌ ಸಂಬಂಧ'ದ ಒಂದು ಆಕೃತಿಯನ್ನು ಸುಲಭದಲ್ಲಿ ಸಂಶ್ಲೇಷಣೆ ಮಾಡಿಕೊಳ್ಳಬಹುದು ಎನ್ನುವ ಬೋಳೆಯಾದ ನಿಲುವನ್ನು ಅವರು ಒಪ್ಪುವುದಿಲ್ಲ. ಈ ಕಾರಣದಿಂದ ಅನಂತಮೂರ್ತಿ ತಮ್ಮ ಎಲ್ಲ ವೈಚಾರಿಕ ನಂಬಿಕೆಗಳನ್ನು ಪರೀಕ್ಷೆಗೆ ಒಳಪಡಿಸುವ ಕಥನಗಳನ್ನು ಹೇಳುತ್ತಿದ್ದಾರೆ. ಈ ಕಥನಗಳು ಮೂರು ಮುಖ್ಯ ಸಂಗತಿಗಳನ್ನು ಹೇಳುತ್ತವೆ:

  1. ಒಂದು ಸಮಾಜದಲ್ಲಿ ಬದುಕುವ ಸಮುದಾಯಗಳ ನಡುವಿನ ನಂಟು ರಮ್ಯವಾದುದ್ದಲ್ಲ; ನಂಬಿಕೆ, ಜೀವನಕ್ರಮಗಳ ಭಿನ್ನತೆಯಿಂದ ಸಮುದಾಯಗಳ ನಡುವೆ ಬಿರುಕು ಗಳಿರುವುದು ಸಹಜ. ಈ ಬಿರುಕುಗಳು- ಅವುಗಳ ಉದ್ಭವಕ್ಕೆ ಕಾರಣಗಳು ಏನೇ ಇದ್ದರೂ ಇಂದು ಅವು ನಮ್ಮ ಜೊತೆ ಇವೆ, ಮುಂದೆಯೂ ಇರಬಹುದು ಎನ್ನುವುದನ್ನು ನಮ್ಮ ಸಾಮಾಜಿಕ ಅಸ್ತಿತ್ವದ ಭಾಗವಾಗಿ ನಾವು ಒಪ್ಪಿಕೊಳ್ಳಬೇಕು.
  2. ಸಮುದಾಯಗಳ ನಡುವಿನ ಬಿರುಕನ್ನು ರಾವುಗನ್ನಡಿ ಇಟ್ಟು ಉತ್ಪ್ರೇಕ್ಷಿಸಿ, ಅಧಿಕಾರ ಲಾಭಕ್ಕಾಗಿ ಹಲವು ಬಗೆಯ ಹಿಂಸೆಗಳನ್ನು ಉದ್ರೇಕಿಸುತ್ತಿರುವ ಆಧುನಿಕ ರಾಜಕೀಯದ ವರಸೆಗಳನ್ನು ನೇರವಾಗಿ ಮುಖಾಮುಖಿಯಾಗಬೇಕು.
  3. ಹಿಂದುಗಳ ಹಾಗೆ ಮುಸ್ಲಿಮರೂ, ಸುಖ-ಸಂಕಷ್ಟಗಳಿಗೆ ತುತ್ತಾಗುವ ದೇಹ, ನೆಮ್ಮದಿ-ನಿರಾಶೆಗಳನ್ನು ಉದ್ದೀಪಿಸುವ ಉದ್ಯೋಗ, ಕಷ್ಟ-ಕಾರ್ಪಣ್ಯಗಳಿಗೆ ತುತ್ತಾಗುವ ಸಾಂಸಾರಿಕ ಬದುಕುಗಳನ್ನೆಲ್ಲಾ ಹೊಂದಿರುವ ನಿತ್ಯಜೀವಿಗಳು. ಇದು ನಮಗೆ ಅರ್ಥವಾದರೆ, ನಮ್ಮ ನಡುವಿನ ಬಿರುಕುಗಳನ್ನು ಅರ್ಥೈಸಿಕೊಳ್ಳಲಿಕ್ಕೂ ಅವುಗಳನ್ನು ಮೀರಿ ಬದುಕುವ ದಾರಿಗಳನ್ನು ಕಂಡುಕೊಳ್ಳಲಿಕ್ಕೂ ನಮ್ಮ ನಿತ್ಯದ ಬದುಕನ್ನು ಒರೆಗಲ್ಲು ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಇದು ನಾವು ಅಗತ್ಯವಾಗಿ ಮನಗಂಡು, ಹಂಬಲಿಸಿ, ರೂಢಿಸಿಕೊಳ್ಳಲು ಉತ್ಸುಕವಾಗಬೇಕಾದ ರಾಜಕೀಯ.

ಮತೀಯ ಹಿಂಸೆ ಹಾಗು ಅದಕ್ಕೆ ಪ್ರತಿಕ್ರಿಯೆಯಾಗಿ ಹುಟ್ಟಿಕೊಳ್ಳಬಹುದಾದ ಹಲವು ಬಗೆಯ ಪ್ರತಿಹಿಂಸೆಗಳಿಂದ ಆತಂಕಿತರಾಗಿರುವ ನನ್ನಂಥವರಿಗಂತೂ ಈ ಕಥನಗಳು ಅಪೂರ್ವವಾದವು. ಇದಕ್ಕಿಂತಲೂ ಹೆಚ್ಚಾಗಿ, ಹಿಂದುತ್ವದ ರಾಜಕೀಯವನ್ನು ಬೆಂಬಲಿಸುವವರನ್ನೂ ಒಂದಿಷ್ಟು ಯೋಚಿಸುವಂತೆ, ತಮ್ಮ ಒಳಗೆ ನೋಡಿಕೊಳ್ಳುವಂತೆ ಪ್ರೇರೇಪಿಸುವ ಶಕ್ತಿಯೂ ಈ ಕಥನಗಳಿಗೆ ಇದೆ.

ಇಷ್ಟು ಹೇಳಿದ ಮೇಲೆ, ಅನಂತಮೂರ್ತಿಯವರ ಕಥನದಲ್ಲಿ ಸಹಜವಾಗಿ ಪ್ರಕಟಿಸಿರುವ ಒಂದು ವಿಸಂಗತಿಯ ಬಗ್ಗೆ ಹೇಳಬೇಕು. `ಭಾರತ-ಪಾಕಿಸ್ತಾನ: ಚರಿತ್ರೆಯನ್ನು ಮೀರುವ ಕನಸು' ಲೇಖದಲ್ಲಿ ಬರುವ ಬುಖಾರಿ, `ದೇಶ ವಿಭಜನೆ: ಇನ್ನೊಂದು ಕಾರಣದ ಕಥನ' ದ ಭುಟ್ಟೊ, `ಕಾಲ ದೇಶ ಮೀರಿದ ಒಂದು ಅಪೂರ್ವ ಘಟನೆ'ಯ ಪಾಕಿಸ್ತಾನಿ ಲೇಖಕ ಇಂತಿಜಾರ್‌ ಹುಸೇನ್‌ ಮತ್ತು ಒಬ್ಬ ಲೇಖಕಿ- ಇವರೆಲ್ಲ ಕಥಾನಕದಲ್ಲಿ, ಒಂದು ಚೌಕಟ್ಟಿನಲ್ಲಿ ಅಚ್ಚುಕಟ್ಟಾಗಿ ಕೂತ ಸಪಾಟು ಚಿತ್ರಗಳ ಹಾಗೆ ಕಾಣುತ್ತಾರೆ. ಆಧುನಿಕ ವಿದ್ಯಾವಂತರು, ಸೂಕ್ಷ್ಮಜ್ಞರೂ ಆದ ಈ ಜನ ತಮ್ಮ ಪ್ರಭುತ್ವದ ಬಗ್ಗೆ ನಿರಾಶೆಭರಿತ ಗೊಂದಲದಲ್ಲೂ ಭಾರತದ ಲಿಬರಲ್‌ ವಾತವರಣದ ಬಗ್ಗೆ ಆಕರ್ಷಣೆಯಲ್ಲೂ ಭಾರತದ ನಾಯಕರು ಒಂದಿಷ್ಟು ರಾಜಕೀಯ ಸಂಕಲ್ಪ ತೋರಿದ್ದರೆ ತಮ್ಮ ಪರಿಸ್ಥಿತಿ ಹೀಗಿರುತ್ತಿರಲಿಲ್ಲ ಎಂಬ ತೋರಿಸಿಕೊಳ್ಳಲಾಗದ ಈರ್ಷ್ಯೆಯಲ್ಲೂ ಬದುಕುತ್ತಿರುವ ಕನಿಕರಕ್ಕೆ ಅರ್ಹರಾದ ಮನುಷ್ಯರ ಹಾಗೆ ತೋರುತ್ತಾರೆ.

ಭಾರತದ ಉನ್ನತಮಟ್ಟದ ಅಧಿಕಾರಿಗಳು ತಮ್ಮ ನೆನಪಿನ ಚಿತ್ರಗಳಲ್ಲಿ ನಿರೂಪಿಸುವ ಪಾಕಿಸ್ತಾನಿ ಅಧಿಕಾರಿಗಳ ಚಿತ್ರವೂ, ಭಾರತದ ಶೈಕ್ಷಣಿಕ ವಿನಿಮಯ ಕಾರ್ಯಕ್ರಮದ ಭಾಗವಾಗಿ ಪಾಕಿಸ್ತಾನದ ಶಿಕ್ಷಕರು- ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಬಂದ ಜನರು ನೀಡುವ ವಿವರವೂ ಹೆಚ್ಚುಕಮ್ಮಿ ಇದೇ ರೂಹುಗಳನ್ನು ತೋರಿಸುತ್ತದೆ. ಅಂದರೆ ಪಾಕಿಸ್ತಾನದ ವಿದ್ಯಾವಂತರ ಬಗ್ಗೆ ನಾವು ನಮಗೆ ಮುದ ನೀಡುವಂತಹ ಒಂದು ಸಿದ್ಧ ಮಾದರಿಯೊಂದನ್ನು ರೂಢಿಸಿಕೊಂಡು ಬಿಟ್ಟಿದ್ದೇವೆಯೇ? ಈ ಚೌಕಟ್ಟಿನಾಚೆಗೆ ಅವರಿಗೆ ಒಂದು ಅಸ್ತಿತ್ವವಿದೆ ಎನ್ನುವುದನ್ನು ನಾವು ಕಾಣಲು ಇಚ್ಛಿಸುತ್ತಿಲ್ಲ. ಇದರ ಅರ್ಥ ಪಾಕಿಸ್ತಾನದ ಸಮ್ಮುಖ ನಾವು patranizing civilan world ಎಂದು ತೋರಿಸಿಕೊಳ್ಳುತ್ತಿದ್ದೇವೆಯೋ?

ಅನಂತಮೂರ್ತಿಯವರ ಕಥನದ ಉದ್ದೇಶವೇ ಸಹಜವೂ, ಕಲ್ಪಿತವೂ ಆದ ಬಿರುಕುಗಳನ್ನು ಕಂಡುಕೊಳ್ಳುವ ಪ್ರಯತ್ನವಾದ್ದರಿಂದ, ಈ ವಿಸಂಗತಿಯೂ ಕಥನ ಪ್ರಕಟಿಸುವ ರೂಪಕದಲ್ಲಿ ಒಟ್ಟಂದದಲ್ಲಿ ಸೇರಿಬಿಡುತ್ತದೆ. ಒಂದು ಒಳ್ಳೆಯ ಕಥನ ವಿಸಂಗತಿಗಳನ್ನು ನಿರೀಕ್ಷಿಸದೆಯೂ ಪ್ರಕಟಿಸುತ್ತದೆ. ಇಲ್ಲಿಯೇ ಸಾಂದರ್ಭಿಕವಾಗಿ, ಪಾಕಿಸ್ತಾನದ ಜನರ ಬಗ್ಗೆ ನಾವು ರೂಢಿಸಿಕೊಂಡಿರುವ ಸಿದ್ಧ ಮಾದರಿಯನ್ನು ಭಂಜಿಸಿದ ಒಂದು ಕಥನದ ಬಗ್ಗೆ ಹೇಳಬೇಕು.

ಜಾವೇದ್‌ ಮಿಯಾಂದಾದ್‌ ಒಬ್ಬ ಅದ್ಭುತ ಕ್ರಿಕೆಟ್‌ ಆಟಗಾರ ಮಾತ್ರವಲ್ಲದೆ, ಆಟದಂಗಳದಲ್ಲಿ ರೋಚಕ ಜಗಳಗಂಟನೂ ಆಗಿದ್ದವನು. ಆತ ತನ್ನ ಕೊನೆಯ ಕ್ರಿಕೆಟ್‌ ಪಂದ್ಯವನ್ನು ಆಡಿದ್ದು ಬೆಂಗಳೂರಿನಲ್ಲಿ. ಆ ಆಟಗಾರನ ಬಗ್ಗೆ ಮರುದಿನ ನಮ್ಮ ಪತ್ರಿಕೆಗಳು ವಿಶೇಷವಾಗಿ ಏನನ್ನೂ ಬರೆಯದಿದ್ದ ಹೊತ್ತಿನಲ್ಲಿ, ಮಿಯಾಂದಾದ್‌ನ ಪ್ರತಿಭೆ ಹಾಗು ವ್ಯಕ್ತಿತ್ವದ ಬಗ್ಗೆ ಭಾರತದ ಖ್ಯಾತ ಆಟಗಾರ ಕಪಿಲ್‌ ದೇವ್‌ ಒಂದು ಲೇಖನ ಬರೆದ. ಅದು ಎಂಥಾ ಅದ್ಭುತ ಬರಹವೆಂದರೆ, ಆಟಗಾರರನ್ನೂ ಸೇರಿದ ಹಾಗೆಯೇ ಪಾಕಿಸ್ತಾನದ ಜನರ ಬಗ್ಗೆ ನಾವು ಇಟ್ಟುಕೊಂಡಿರುವ ಪೂರ್ವಗ್ರಹಗಳನ್ನು ಬುಡಮೇಲು ಮಾಡಿಬಿಡುವಂತಹುದು. ನಮ್ಮ ಇಂಗ್ಲಿಷ್‌ ಪತ್ರಿಕೆಗಳು ಕಟ್ಟಿಕೊಟ್ಟ ಒರಟ, ಜಗಳಗಂಟ ಮಿಯಾಂದಾದ್‌ನ ಸಪಾಟು ಚಿತ್ರವನ್ನು ಛಿದ್ರಮಾಡಿ, ಜೀವಂತ ಮಿಯಾಂದಾದ್‌ನನ್ನು ನಿರೂಪಿಸಿದ ಕಪಿಲ್‌ ಬರೆದ ಕಥಾನಕ ಇವತ್ತಿಗೂ ಅಪರೂಪ.

-ಕೆ. ಫಣಿರಾಜ್‌
ಈ ಪ್ರತಿಕ್ರಿಯೆಗೆ ಕಾರಣವಾದ ಮೂಲ ಲೇಖನಗಳು
1. ದೇಶ ವಿಭಜನೆ: ಇನ್ನೊಂದು ಕಾರಣದ ಕಥನ
2. ಭಾರತ-ಪಾಕಿಸ್ತಾನ: ಚರಿತ್ರೆಯನ್ನು ಮೀರುವ ಒಂದು ಕನಸು
3. ಕಾಲ ದೇಶ ಮೀರಿದ ಒಂದು ಅಪೂರ್ವ ಘಟನೆ

 

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
Image CAPTCHA
Copy the characters (respecting upper/lower case) from the image.